ಕಾಂಗರೂ ಇಲಿ 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

        
 ಉತ್ತರ ಅಮೆರಿಕ ಬೃಹದ್ ಮೈದಾನಗಳಲ್ಲಿ, ನೈಋತ್ಯಭಾಗದಲ್ಲಿನ ಮರುಭೂಮಿಯಲ್ಲಿ ವಾಸಿಸುವ ಒಂದು ಪುಟ್ಟ ದಂಶಕ (ರೋಡೆಂಟ್). ಡೈಪೊಡೋಮಿಸ್ ಜಾತಿಗೂ ಹೆಟರೋಮೈಯಿಡೀ ಕುಟುಂಬಕ್ಕೂ ಸೇರಿದೆ. ಮೆಕ್ಸಿಕೋ, ಕ್ಯಾಲಿಫೋರ್ನಿಯ, ಇಡಾಹೊ, ವ್ಯೋಮಿಂಗ್ ಮತ್ತು ಓಕ್ಲಹೋಮ ರಾಜ್ಯಗಳಲ್ಲಿ ಬಲು ಸಾಮಾನ್ಯ. ಈ ಜಾತಿಯಲ್ಲಿ ಸುಮಾರು 50 ಪ್ರಭೇದಗಳಿವೆ. ಎಲ್ಲವೂ ಸಾಧಾರಣವಾಗಿ 4"-6ಳಿ" ಉದ್ದ ಬೆಳೆಯುತ್ತವೆ. ದೇಹದ ಬಣ್ಣ ಕೆಲವದರಲ್ಲಿ ಕಂದು. ಇನ್ನು ಕೆಲವು ತಿಳಿಬೂದಿ ಬಣ್ಣದವು. ಮಧ್ಯವರ್ತಿ ಬಣ್ಣಗಳ ಇಲಿಗಳೂ ಉಂಟು. ಎಲ್ಲ ಪ್ರಭೇದಗಳಿಗೂ ಇರುವ ಸಾಮಾನ್ಯ ಲಕ್ಷಣಗಳಿವು: ದಪ್ಪತಲೆ, ದೊಡ್ಡದೊಡ್ಡ ಕಣ್ಣುಗಳು, ಬಲುಪುಟ್ಟ ಮುಂಗಾಲುಗಳು, ಬಹಳ ಉದ್ದವಾದ ಹಿಂಗಾಲುಗಳು, ಮತ್ತು ದೇಹಕ್ಕಿಂತ ಉದ್ದವಾದ ಬಾಲ. ಕೆನ್ನೆಯ ಎರಡೂ ಕಡೆ ಆಹಾರವನ್ನು ಕೂಡಿಡಲು ಸಂಚಿಗಳಿರುವುದು ಇವುಗಳ ಇನ್ನೊಂದು ವಿಶೇಷ ಲಕ್ಷಣ. ಪಾದಗಳು ಮತ್ತು ಉದರಭಾಗ ಬಿಳಿಯ ಬಣ್ಣವಾಗಿವೆ. ಪೃಷ್ಠಭಾಗ ಮತ್ತು ಬಾಲದ ಎರಡೂ ಪಕ್ಕಗಳಲ್ಲಿ ಉದ್ದನೆಯ ಬಿಳಿ ಪಟ್ಟೆಯಿದೆ. ಬಾಲದ ತುದಿ ಕುಚ್ಚಿನಂತಿದೆ.

 ಮರದ ದಿಮ್ಮಿಗಳ ಕೆಳಗೆ, ದಟ್ಟವಾದ ಪೊದೆಗಳಲ್ಲಿ, ನೆಲದಲ್ಲಿ ಬಿಲಗಳನ್ನು ತೋಡಿ ಅವುಗಳಲ್ಲಿದು ವಾಸಿಸುತ್ತದೆ.  ಕಾಳು, ಹುಲ್ಲು, ಮಿಡತೆ ಮುಂತಾದ ಕೀಟಗಳು ಇದರ ಪ್ರಧಾನ ಆಹಾರ. ಹೆಚ್ಚಾದ ಆಹಾರವನ್ನು ತನ್ನ ಬಿಲದಲ್ಲಿನ ಕೆಲವು ವಿಶೇಷ ಗೂಡುಗಳಲ್ಲಿ ಕೂಡಿಡುತ್ತದೆ. ಆಹಾರಕ್ಕಾಗಿ ಬಲು ಸುಟಿಯಾಗಿ ಕಾಂಗರೂಗಳಂತೆ ಹಿಂಗಾಲು ಊರಿ ಕುಪ್ಪಳಿಸುತ್ತ ಓಡಾಡುತ್ತದೆ. ಬಲುಚೆನ್ನಾಗಿ ನೆಗೆಯಲೂ ಬಲ್ಲುದು ; ಒಂದು ನೆಗೆತಕ್ಕೆ ಸುಮಾರು 6`-7` ದೂರ ಕ್ರಮಿಸಬಲ್ಲುದು. ಹೀಗೆ ಹಾರುವಾಗ ಸಮತೋಲನವನ್ನು ಕಾಯ್ದಕೊಳ್ಳಲೂ ದಿಕ್ಕನ್ನು ಬದಲಾಯಿಸಲೂ ಚುಕ್ಕಾಣಿಯಂತೆ ತನ್ನ ಬಾಲವನ್ನು ಉಪಯೋಗಿಸುತ್ತದೆ.

 ಕಾಂಗರೂ ಇಲಿ ವರ್ಷಕ್ಕೆ ಎರಡು ಮೂರು ಸಲ ಮರಿ ಹಾಕುತ್ತದೆ. ಒಂದು ಸೂಲಿಗೆ 3-5 ಮರಿಗಳನ್ನು ಹೆರುವುದು ವಾಡಿಕೆ. ಹುಟ್ಟಿದಾಗಿನಿಂದ ಸುಮಾರು 15 ದಿವಸಗಳವರೆಗೂ ಮರಿಗಳ ಕಣ್ಣುಗಳು ಮುಚ್ಚಿಕೊಂಡೇ ಇರುತ್ತವೆ.

 

(ಎ.)